UK Express Logo

ಭದ್ರತಾ ಲೋಪ ಎತ್ತಿ ತೋರಿಸಿದ ಘಟನೆ: ಚೆಕ್ ಬೌನ್ಸ್ ಆರೋಪಿ ಪರಾರಿ, ಪುನಃ ಬಂಧನ

By UKExpress on 7/27/2025

Picsart-25-07-27-15-17-26-122

ಕುಮಟಾ: ಚೆಕ್ ಬೌನ್ಸ್ ಪ್ರಕರಣದಲ್ಲಿ ಭಟ್ಕಳ ನ್ಯಾಯಾಲಯದಿಂದ ಕಾರವಾರದ ಜಿಲ್ಲಾ ಕಾರಾಗೃಹಕ್ಕೆ ಸಾಗಿಸಲಾಗುತ್ತಿದ್ದ ಆರೋಪಿಯೊಬ್ಬ ಜುಲೈ 25ರಂದು ಕುಮಟಾ ತಾಲ್ಲೂಕಿನ ಹೊಳಗದ್ದೆ ಟೋಲ್‌ಗೇಟ್ ಬಳಿ ಕಾರಿನಿಂದ ಜಿಗಿದು ನಾಟಕೀಯವಾಗಿ ಪರಾರಿಯಾಗಿದ್ದನು. ಆದರೆ, ಕುಮಟಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಆತನನ್ನು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಟ್ಕಳದ ಯಲ್ವಡಿಕವೂರ ಗಣೇಶನಗರ ನಿವಾಸಿ ಸಮೀರ್ ಬಾಷಾ ಬಂಧಿತ ಆರೋಪಿ. ಸಮೀರ್ ಬಾಷಾ ವಿರುದ್ಧ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಜುಲೈ 25ರಂದು ಭಟ್ಕಳ ಪೊಲೀಸರು ಆತನನ್ನು ವಶಕ್ಕೆ ಪಡೆದು, ಅದೇ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ ಜುಲೈ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿ, ಕಾರವಾರ ಜೈಲಿಗೆ ಕಳುಹಿಸುವಂತೆ ಆದೇಶಿಸಿತ್ತು. ನ್ಯಾಯಾಲಯದ ನಿರ್ದೇಶನದಂತೆ, ಭಟ್ಕಳ ನ್ಯಾಯಾಲಯದ ಸಿಬ್ಬಂದಿ ಗೋಪಾಲಕೃಷ್ಣ ಕುಡಾಳಕರ್ ಅವರು ಬಾಡಿಗೆ ಕಾರಿನಲ್ಲಿ ಸಮೀರ್ ಬಾಷಾನನ್ನು ಕಾರವಾರ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಕುಮಟಾ ಸಮೀಪದ ಹೊಳಗದ್ದೆ ಟೋಲ್‌ಗೇಟ್ ಬಳಿ ಕಾರು ನಿಧಾನಗೊಂಡಾಗ, ಕಿಟಕಿಯ ಪಕ್ಕ ಕುಳಿತಿದ್ದ ಸಮೀರ್ ಬಾಷಾ ಏಕಾಏಕಿ ಕಾರಿನ ಬಾಗಿಲು ತೆರೆದು ಹೊರಗೆ ಜಿಗಿದು ಅರಣ್ಯ ಪ್ರದೇಶದತ್ತ ಓಡಿದ್ದಾನೆ. ಆತನನ್ನು ಹಿಡಿಯಲು ನ್ಯಾಯಾಲಯದ ಸಿಬ್ಬಂದಿ ಪ್ರಯತ್ನಿಸಿದರೂ ವಿಫಲರಾಗಿದ್ದಾರೆ. ಕೂಡಲೇ ಅವರು ಕುಮಟಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಗೋಪಾಲಕೃಷ್ಣ ಕುಡಾಳಕರ್ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಾಹಿತಿ ಪಡೆದ ಕೂಡಲೇ ಕುಮಟಾ ಪೊಲೀಸರು ತಕ್ಷಣ ಕಾರ್ಯಾಚರಣೆಗೆ ಇಳಿದು, ಆರೋಪಿ ಸಮೀರ್ ಬಾಷಾ ಭಟ್ಕಳಕ್ಕೆ ತೆರಳಿದ್ದಾನೆ ಎಂಬ ಸುಳಿವು ಆಧರಿಸಿ ಶೋಧ ಕಾರ್ಯ ತೀವ್ರಗೊಳಿಸಿದ್ದರು. ಕೆಲವೇ ಗಂಟೆಗಳಲ್ಲಿ, ಕುಮಟಾ ಪೊಲೀಸರು ಭಟ್ಕಳದಲ್ಲಿ ಸಮೀರ್ ಬಾಷಾನನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧನದ ಬಳಿಕ ಸಮೀರ್ ಬಾಷಾನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಕಾರವಾರ ಜೈಲಿಗೆ ಕಳುಹಿಸಲಾಯಿತು. ಈ ಘಟನೆಯು ಸ್ಥಳೀಯ ಪೊಲೀಸ್ ಇಲಾಖೆಯ ಚುರುಕುತನಕ್ಕೆ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಆರೋಪಿಗಳ ಸಾಗಣೆಯ ಸಂದರ್ಭದಲ್ಲಿ ಭದ್ರತೆಯ ಕೊರತೆಯನ್ನು ಈ ಘಟನೆ ಎತ್ತಿ ತೋರಿಸಿದೆ.